- ಪುಸ್ತಕದ ಹೆಸರು: ಕರ್ಣಾಟಕ ಶಬ್ದಾನುಶಾಸನ
- ಲೇಖಕನ ಹೆಸರು: ಭಟ್ಟಾಕಳಂಕ
-
ಕಾಲ ಮತ್ತು ಜೀವನ ವಿವರಗಳು:
ಹದಿನೇಳನೆಯ ಶತಮಾನ, ಈ ಕೃತಿಯನ್ನು ರಚಿಸಿದ್ದು 1604 ರಲ್ಲಿ. ಉತ್ತರ ಕನ್ನಡ ಜಿಲ್ಲೆಯ ಸೋಂದ ಎಂಬ
ಚಿಕ್ಕ ಊರಿನಲ್ಲಿ ಜೈನಮಠದ ಅಧ್ಯಕ್ಷನಾಗಿದ್ದನು. ಸ್ವಾದಿ ಮನೆತನದ ಇಮ್ಮಡಿ ಅರಸಪ್ಪ ನಾಯಕನು ಇವನ ಆಶ್ರಯದಾತ
ದೊರೆ.
- ವಸ್ತು: ಕನ್ನಡ ವ್ಯಾಕರಣ
-
ಪರಿಚಯ:
ಕರ್ಣಾಟಕ ಶಬ್ದಾನುಶಾಸನವು ಸಂಸ್ಕತದಲ್ಲಿ ಬರೆದಿರುವ ಕನ್ನಡ ವ್ಯಾಕರಣ. ಭಟ್ಟಾಕಳಂಕದೇವನು ವ್ಯಾಕರಣ,
ತರ್ಕ, ಶಿಲ್ಪ, ಜ್ಯೋತಿಷ್ಯ, ನೃತ್ಯ, ಗಣಿತ ಮುಂತಾದ ಹಲವು ಶಾಸ್ತ್ರಗಳಲ್ಲಿ ಪರಿಣಿತನಾದ ವಿದ್ವಾಂಸ.
ಅವನು ಸಂಸ್ಕೃತ, ಪ್ರಾಕೃತ, ಮಾಗಧಿ, ಕನ್ನಡ ಮುಂತಾದ ಆರು ಭಾಷೆಗಳನ್ನು ಚೆನ್ನಾಗಿ ಬಲ್ಲವನು. ಈ ಕೃತಿಯನ್ನು
ಸಂಸ್ಕೃತದಲ್ಲಿ ಬರೆದಿರುವುದು ಕನ್ನಡದ ಬಗೆಗಿನ ತಿರಸ್ಕಾರದಿಂದ ಅಲ್ಲ. ಭಟ್ಟಾಕಳಂಕನು ತನ್ನ ಪುಸ್ತಕಕ್ಕೆ
ಕುತೂಹಲಕಾರಿಯಾದ ಹಿನ್ನೆಲೆಯನ್ನು ಒದಗಿಸುತ್ತಾನೆ. ಕನ್ನಡದ ಬಗ್ಗ ಗೌರವವಿಲ್ಲದ ವಿದ್ವಂಸನೊಬ್ಬನು,
ಅದರ ಬಗ್ಗೆ ಅವಮಾನಕರವಾದ ಟೀಕೆಗಳನ್ನು ಮಾಡಿ, ಆ ಭಾಷೆಗೆ ವ್ಯಾಕರಣದ ಅಗತ್ಯವೇ ಇಲ್ಲವೆಂದು ಹೇಳಿದನಂತೆ.
ಕನ್ನಡವು ಕೇವಲ ಆಡುಮಾತು ಎನ್ನುವುದು ಅವನ ಅಭಿಪ್ರಾಯ. ಇಂತಹವರಿಗೆ ಉತ್ತರ ಕೊಡುವುದು ತನ್ನ ಕರ್ತವ್ಯವೆಂದು
ತಿಳಿದ ಭಟ್ಟಾಕಳಂಕನು, ತನ್ನ ಕೃತಿಯ ಮೊದಲ ಭಾಗದಲ್ಲಿ ಕನ್ನಡದ ಚರಿತ್ರೆ, ಸಾಹಿತ್ಯ ಪರಂಪರೆ ಮತ್ತು
ಅದರ ಸಾಮರ್ಥ್ಯವನ್ನು ಕುರಿತು ವಿವರಿಸುತ್ತಾನೆ. ಕನ್ನಡ ಭಾಷೆಗೆ ಒಂದು ವಿಧಾಯಕವಾದ ವ್ಯಾಕರಣವನ್ನು
ಬರೆಯುವುದರಿಂದ, ಪಂಡಿತ ಪಾಮರರಿಬ್ಬರಿಗೂ ಉಪಯೋಗವಾಗುವುದೆಂದು ಅವನ ಅಭಿಪ್ರಾಯ. ಕನ್ನಡಕ್ಕೆ ಒಂದು
ಪ್ರಮಾಣಭಾಷೆಯನ್ನು ರೂಪಿಸಲು ಅವನು ಪ್ರಯತ್ನಿಸುತ್ತಿದ್ದಾನೆ. ಕನ್ನಡ ಮತ್ತು ಸಂಸ್ಕೃತಗಳ ವ್ಯಾಕರಣ
ಪರಂಪರೆಯ ಬಗ್ಗೆ ಅವನಿಗೆ ಇರುವ ತಿಳಿವಳಿಕೆಯು ಈ ಕೆಲಸದಲ್ಲಿ ಸಹಾಯಕವಾಗಿದೆ. ಅವನ ಪುಸ್ತಕವು ಅತ್ಯಂತ
ಖಚಿತವಾಗಿದ್ದು, ಬಹಳ ವೈಜ್ಞಾನಿಕವಾದ ವಿಧಾನಗಳನ್ನು ಬಳಸುತ್ತದೆ. ಅವನು ತನ್ನ ವಸ್ತುವಿಗಾಗಿ ಕನ್ನಡ
ವೈಯಾಕರಣಿಗಳನ್ನೂ ನಿರೂಪಣೆಯ ವಿಧಾನಕ್ಕಾಗಿ, ಸಂಸ್ಕೃತ ವ್ಯಾಕರಣಕಾರರನ್ನೂ ಅವಲಂಬಿಸಿದ್ದಾನೆ.
ಶಬ್ದಾನುಶಾಸನದಲ್ಲಿ ನಾಲ್ಕು ಅಧ್ಯಾಯಗಳಿವೆ. ಅವುಗಳಲ್ಲಿ 592
ಸೂತ್ರಗಳಿವೆ. ಮೊದಲ ಅಧ್ಯಾಯದಲ್ಲಿ ವರ್ಣಮಾಲೆ, ಸಂಧಿ, ನಿಪಾತ ಮತ್ತು ಅವ್ಯಯಗಳನ್ನು ನಿರೂಪಿಸಲಾಗಿದೆ.
ಎರಡನೆಯ ಅಧ್ಯಾಯವು ಲಿಂಗ,ವಿಭಕ್ತಿ ಪ್ರತ್ಯಯಗಳು ಮತ್ತು ಸಂಸ್ಕೃತದಿಂದ ಕನ್ನಡಕ್ಕೆ ಬಂದಿರುವ ಪದಗಳ
ಸ್ವರೂಪವನ್ನು ಪರಿಶೀಲಿಸುತ್ತದೆ. ಸರ್ವನಾಮ, ಸಮಾಸ ಮತ್ತು ಸಂಖ್ಯಾವಾಚಕಗಳ ಪರಿಶೀಲನೆಯು ಮೂರನೆಯ ಅಧ್ಯಾಯದಲ್ಲಿ
ನಡೆದಿದೆ. ಕೊನೆಯ ಅಧ್ಯಾಯದಲ್ಲಿ ಕ್ರಿಯಾಪದಗಳು ಮತ್ತು ಅಲ್ಲಿ ಪ್ರಸ್ತುತವಾಗುವ ಪ್ರತ್ಯಯಗಳನ್ನು ವಿವರಿಸಲಾಗಿದೆ.
ಭಟ್ಟಾಕಳಂಕನು ಕೊಡುವ ನಿದರ್ಶನಗಳು ಕನ್ನಡದ ಮತ್ತು ಸಂಸ್ಕೃತದ ಸಾಹಿತ್ಯಕ ಪಠ್ಯಗಳಿಗೆ ಸೀಮಿತವಾಗಿವೆ.
ಭಟ್ಟಾಕಳಂಕನು, ಕೇಶಿರಾಜನಂತೆ ಆಡುಮಾತಿನ ಬಗೆಗಳನ್ನು ಗಮನಿಸದೆ ಇರುವುದು ಅವನ ಪರಿಮಿತಿಯಾಗಿದೆ. ಆದರೆ,
ಅವನು ಆದಿಪುರಾಣ, ವಿಕ್ರಮಾರ್ಜುನವಿಜಯ, ಜಿನಾಕ್ಷರಮಾಲೆ, ಗದಾಯುದ್ಧ, ಪಂಚತಂತ್ರ, ಪಂಪ ರಾಮಾಯಣ, ಕಬ್ಬಿಗರ
ಕಾವ, ಕಾವ್ಯಸಾರ ಮುಂತಾದ ಶ್ರೇಷ್ಠ ಕೃತಿಗಳನ್ನು ಬಳಸಿಕೊಂಡಿದ್ದಾನೆ. ಶಬ್ದಾನುಶಾಸನವನ್ನು ಕುರಿತು
‘ಭಾಷಾಮಂಜರಿ’ ಎಂಬ ವೃತ್ತಿ ಮತ್ತು
‘ಮಂಜರಿ
ಮಕರಂದ’
ಎಂಬ ಟೀಕುಗಳನ್ನು ಬರೆಯಲಾಗಿದೆ. ಇಪ್ಪತ್ತನೆಯ ಶತಮಾನದಲ್ಲಿಯೂ ಈ ಕೃತಿಗೆ ಕೆಲವು ವ್ಯಾಖ್ಯಾನಗಳು ಬಂದಿವೆ.
- ಪ್ರಕಟಣೆಯ ಇತಿಹಾಸ:
ಅ. 1890, ಸಂ. ಬಿ.ಎಲ್. ರೈಸ್,
(ಇಂಗ್ಲಿಷ್ ಅನುವಾದ ಮತ್ತು ಟಿಪ್ಪಣಿಗಳೊಂದಿಗೆ)
ಆ. 1923, ಸಂ. ಆರ್. ನರಸಿಂಹಾಚಾರ್, (ಕನ್ನಡ ಲಿಪಿಯಲ್ಲಿದೆ.
ಇಂಗ್ಲಿಷಿನಲ್ಲಿ ಟಿಪ್ಪಣಿಗಳು, ಇಲ್ಲಿನ ಸೂತ್ರಗಳಿಗೆ ಸಂಬಂಧಿಸಿದ ಸಂಸ್ಕೃತ ಹಾಗೂ ಕನ್ನಡ ವ್ಯಾಕರಣಗಳ
ಸೂತ್ರಗಳು, ಪಾರಿಭಾಷಿಕ ಶಬ್ದಗಳ ವಿವರಣೆ ಇತ್ಯಾದಿ)
ಇ. 1941, ಸಂ. ಶಿ.ಶಿ. ಬಸವನಾಳ, (ಕುಂಡಲಗಿರ್ಯಾಚಾರ್ಯ ಮತ್ತು
ಮ.ಪ್ರ.ಪೂಜಾರರ ಟೀಕೆಗಳೊಂದಿಗೆ)
ಈ 1968, ಸಂ. ಡಿ. ಪದ್ಮನಾಭಶರ್ಮ,
‘ನಲ್ನುಡಿಗನ್ನಡ’ ಎಂಬ ವ್ಯಾಖ್ಯಾನದೊಂದಿಗೆ)
- ಮುಂದಿನ ಓದು ಮತ್ತು ಲಿಂಕುಗಳು:
- ಅನುವಾದ